ಜೀವಿವಿಷಹಾರಿಗಳು -
	ಜೀವಿವಿಷಗಳಿಂದ (ನೋಡಿ- ಜೀವಿವಿಷ) ದೇಹಕ್ಕೆ ತೊಂದರೆ ಆಗದಂತೆ ರಕ್ಷಿಸುವ ಹಾಗೂ ಪ್ರಾಣಿದೇಹದಲ್ಲಿ ಉತ್ಪನ್ನವಾಗುವ ಪ್ರೋಟೀನ್ ಸಂಯುಕ್ತಗಳು (ಆಂಟಿಟಾಕ್ಸಿನ್ಸ್). ಸಾಮಾನ್ಯವಾಗಿ ಎಲ್ಲವೂ ಗ್ಯಾಮಗ್ಲಾಬ್ಯುಲಿನ್ ಎಂಬ ಪ್ರೋಟೀನುಗಳ ಗುಂಪಿಗೆ ಸೇರಿದವು. ಒಂದೊಂದು ಜೀವಿವಿಷಕ್ಕೂ ಪ್ರತಿರೋಧಿಯಾದ ಜೀವಿವಿಷಹಾರಿ ಇರುತ್ತದೆ. ಇದು ಅನುಗುಣವಾದ ಜೀವಿವಿಷದೊಡನೆ ಸೇರಿ ಅದರ ವಿಷಗುಣವನ್ನು ನಾಶಪಡಿಸುತ್ತದೆ. ಆದ್ದರಿಂದ ಜೀವಿವಿಷಹಾರಿ-ಜೀವಿವಿಷಗಳ ಮಿಶ್ರಣವನ್ನು ಪ್ರಾಯೋಗಿಕವಾಗಿ ದೇಹದೊಳಗೆ ಸೇರಿಸಿದರೆ ಅದರಿಂದ ಏನೂ ತೊಂದರೆ ಆಗುವುದಿಲ್ಲ. ಸಾಮಾನ್ಯವಾಗಿ ಒಂದು ಜೀವಿ ವಿಷಹಾರಿ ಅದಕ್ಕೆ ಸಂಬಂಧಿಸಿದ ಜೀವಿವಿಷದ ಮೇಲೆ ಮಾತ್ರ ಪ್ರಭಾವ ಹೊಂದಿರುತ್ತದೆ. ಬೇರೆ ಜೀವಿವಿಷಗಳ ಮೇಲೆ ಅದರ ಪ್ರಭಾವ ಏನೂ ಇರುವುದಿಲ್ಲ. ಹೀಗಾಗಿ ಜೀವಿವಿಷಹಾರಿ-ಜೀವಿವಿಷಗಳ ಸಂಬಂಧವನ್ನು ಬೀಗದಕೈ-ಬೀಗಗಳ ಸಂಬಂಧಕ್ಕೆ ಹೋಲಿಸಿದ್ದಾರೆ. ಜೀವಿವಿಷಾಹರಿಗಳು ಪ್ರಾಣಿದೇಹದಲ್ಲಿ ಉತ್ಪನ್ನವಾಗುವುದು ತಕ್ಕ ಜೀವಿವಿಷಗಳ ಪ್ರಚೋದನೆಯಿಂದಲೇ. ಈ ಉತ್ಪತ್ತಿ ದೇಹದ ಕೆಲವು ಪ್ರತಿ ವಸ್ತುಜನಕಕೋಶಗಳಿಂದ ಆಗುವುದು. ಇವು ರಕ್ತದ ಶ್ವೇತಕಣಗಳ ಸಂಬಂಧಿಗಳು. ಜೀವಿವಿಷಗಳು ಸಾಮಾನ್ಯವಾಗಿ ಪ್ರೋಟೀನುಗಳು. ಇವುಗಳ ರಚನೆ ವಿಶಿಷ್ಟ ಘಟಕಗಳಿಂದಾದ ಸರಪಳಿಗಳಂತೆ ಇದೆ. ಸರಪಳಿಯ ಘಟಕಗಳೇ ಅಲ್ಲದೆ ಅಂಕುಡೊಂಕುಗಳೂ ವಿವಿಧವಾಗಿರುವುದು ತಿಳಿದಿದೆ. ಈ ವೈವಿಧ್ಯಗಳಿಂದಲೇ ಜೀವಿವಿಷಗಳೂ ವಿವಿಧವಾಗಿರುತ್ತದೆಂಬುದು ವ್ಯಕ್ತ. ಪ್ರತಿ ವಸ್ತುಜನಕಕೋಶಗಳಿಂದ ಜೀವಿವಿಷಹಾರಿಗಳು ಉತ್ಪನ್ನವಾಗುವಾಗ ವಿಷವಸ್ತುವಿನ ಸರಪಳಿಯ ಘಟಕಗಳು ಹಾಗೂ ಅಂಕುಡೊಂಕುಗಳಿಗೆ ಹೊಂದಿಕೊಳ್ಳುವಂತೆ ಇನ್ನೊಂದು ಪ್ರೋಟೀನಿನ ಸೃಷ್ಟಿ ಆಗುತ್ತದೆ. ಈ ಪ್ರೋಟೀನೇ ವಿಷಹಾರಿ. ಆದ್ದರಿಂದ ಹೀಗೆ ಉತ್ಪನ್ನವಾದ ಜೀವಿವಿಷಹಾರಿಯ ಭಿನ್ನಘಟಕಗಳು ಮತ್ತು ಅಂಕು ಡೊಂಕುಗಳಿರುವ ವಿಷ ಪ್ರೋಟೀನಿನೊಂದಿಗೆ ಸೇರಲಾರದು.

ಜೀವಿವಿಷಹಾರಿಯ ತಯಾರಿಕೆ ಈ ರೀತಿ ಎಂದು ಭಾವಿಸಿದರೆ ಅದರ ಒಂದೊಂದು ಬೃಹದಣುವಿನ ಸೃಷ್ಟಿಗೂ ಒಂದೊಂದು ಜೀವಿವಿಷದ ಬೃಹದಣು ಇರಬೇಕಾದುದು ಅಗತ್ಯ. ಜೀವಿವಿಷದ ಪರಿಮಾಣದಷ್ಟಕ್ಕೆ ಜೀವಿವಿಷಹಾರಿಯ ಸೃಷ್ಟಿ ಸೀಮಿತವಾಗಿರುತ್ತದೆ. ಜೀವಿವಿಷ ದೇಹದಲ್ಲಿದ್ದಾಗ ಮಾತ್ರ ಜೀವಿವಿಷಹಾರಿಯ ಅಸ್ತಿತ್ವ ಸಾಧ್ಯ ಎಂದು ತರ್ಕಿಸಬೇಕಾಗುತ್ತದೆ. ಆದರೆ ದೇಹದಲ್ಲಿ ಜೀವಿವಿಷ ಇಲ್ಲದಾಗಲೂ ವಿಷಹಾರಿ ಇರುವುದು ವ್ಯಕ್ತವಾಗಿದೆ. ಜೀವಿವಿಷ ದೇಹಕ್ಕೆ ಸೇರಿದಾಗ ವಿಷಹಾರಿವಸ್ತುವಿನ ತಯಾರಿಕೆ ಆಗುವುದು ಸರಿ. ತಕ್ಕಷ್ಟು ವಿಷಹಾರಿ ವಸ್ತುವಿನ ತಯಾರಿಕೆ ಆಗಿ ಅದು ವಿಷವಸ್ತುವಿನೊಡನೆ ಸೇರಿ ಜಡವಸ್ತುವಾಗಿ ಪರಿಣಮಿಸಿ ಬಿಟ್ಟಮೇಲೆ ಇನ್ನೆಲ್ಲಿಯ ವಿಷಹಾರಿವಸ್ತು? ಅದು ಹೇಗೆ ಉತ್ಪನ್ನವಾಯಿತು? ಹೇಗೆ ದೇಹದಲ್ಲಿ ಅಸ್ತಿತ್ವಗೊಳ್ಳುವುದಕ್ಕೆ ಸಾಧ್ಯ ಎನ್ನುವುದು ಪ್ರಶ್ನೆ. ಇದು ಬಗೆಹರಿದಲ್ಲಿ ತಯಾರಿಕಾಕ್ರಮ ದೇಹದಲ್ಲಿ ಪ್ರಾರಂಭವಾದ ಬಳಿಕ ಆ ಕಾಲಕ್ಕೆ ಮಾತ್ರ ಅದು ಸೀಮಿತವಾಗಿರುವುದಿಲ್ಲ; ಹೆಚ್ಚು ವಿಷಹಾರಿ ವಸ್ತು ತಯಾರಾಗುವುದೇ ಅಲ್ಲದೆ ಮುಂದೆ ಆವಶ್ಯಕತೆ ಬಿದ್ದರೆ ಹೊಸ ಪ್ರಚೋದನೆ ಇಲ್ಲದೆ ಮತ್ತೆ ತಯಾರಾಗುತ್ತದೆ ಎಂದುಕೊಂಡರೂ ಇನ್ನೊಂದು ಪ್ರಶ್ನೆ ಉಳಿದೇ ಉಳಿಯುತ್ತದೆ. ನೈಸರ್ಗಿಕವಾಗಿಯೇ (ದೇಹದಲ್ಲಿ) ವಿಷಹಾರಿಗಳು ಇರುವುದು ತಿಳಿದಿದೆ. ಪ್ರಚೋದನೆಯಿಂದ ಅನುಗುಣವಾದ ನಿರೋಧಕವಸ್ತು ತಯಾರಾಗುತ್ತದೆ ಎಂದು ಹೇಳಿದ ಬಳಿಕ ಒಂದು ಸಲವಾದರೂ ವಿಷವಸ್ತು ದೇಹದೊಳಗೆ ಸೇರಿ ಪ್ರಚೋದಿಸದೆ ನೈಸರ್ಗಿಕವಾಗಿಯೇ ವಿಷಹಾರಿ ವಸ್ತುವಿನ ಉತ್ಪನ್ನವಾಗಿರುವ ಸಂದರ್ಭಕ್ಕೆ ಸಮಾಧಾನ ಕೊಡುವುದಕ್ಕೆ ಆಗುವುದಿಲ್ಲ. ವಿಷಹಾರಿಯು ವಿಷದೊಡನೆ ಸೇರಿ ಆಗುವ ಜಡವಸ್ತುವಿನಿಂದ ಪ್ರಾಯೋಗಿಕವಾಗಿ ವಿಷವನ್ನು ಮರಳಿ ಪಡೆಯಬಹುದಾದ್ದರಿಂದ ವಿಷ ನಾಶವಾಗಿರುವುದಿಲ್ಲ. ಜಡಸಂಯುಕ್ತ ಜೀವಕೋಶಗಳಿಗೆ ಅಂಟಿಕೊಂಡು ವಿಷಪರಿಣಾಮವನ್ನು ಉಂಟುಮಾಡಲು ಸಾಧ್ಯವಾಗುವುದಿಲ್ಲ. ವಿಷವಸ್ತು ಜೀವಕೋಶಕ್ಕೆ ಅಂಟಿಕೊಳ್ಳಬಹುದಾದ ಸ್ಥಳವನ್ನು ವಿಷಹಾರಿ ಆಕ್ರಮಿಸಿಬಿಟ್ಟಿರುವುದರಿಂದ ಹೀಗೆ ಎಂದು ತೋರುತ್ತದೆ. ಆದರೆ ಇದೂ ನಿಶ್ಚಿತವಲ್ಲ.

ಪ್ರಾಣಿಗಳಲ್ಲಿ ವಿಷಹಾರಿಗಳು ಅಧಿಕವಾಗಿ ತಯಾರಾಗುವಂತೆ ಪ್ರಾಯೋಗಿಕವಾಗಿ ಪ್ರಚೋದಿಸಿ ಅನಂತರ ಈ ವಸ್ತುವನ್ನು ಪ್ರತ್ಯೇಕವಾಗಿ ಸಂಗ್ರಹಿಸಬಹುದು. ಅನೇಕ ವಿಷಹಾರಿಗಳ ತಯಾರಿಕೆ ಹೀಗೆಯೇ ಆಗಿದೆ. ವಿಷಮಿಸಿದ ಪ್ರಸಂಗಗಳಲ್ಲಿ (ಟಾಕ್ಸಿಕ್ ಕಂಡಿಷನ್) ಕೃತಕವಾಗಿ ತಯಾರಿಸಿದ ಇಂಥ ವಿಷಹಾರಿಗಳನ್ನು ಚುಚ್ಚು ಮದ್ದಾಗಿ ಕೊಟ್ಟು ಚಿಕಿತ್ಸೆ ಮಾಡಬಹುದು. ಸಿದ್ಧವಿಷಹಾರಿಯನ್ನು ಉಪಯೋಗಿಸಿ ರಕ್ಷಣೆ ಒದಗಿಸುವ ಇಂಥ ವಿಧಾನಕ್ಕೆ ಹಂಗಾಮಿರಕ್ಷಣೆ (ಪ್ಯಾಸ್ಸಿವ್‍ಇಮ್ಯೂನಿಟಿ) ಎಂದು ಹೆಸರು. ಸಾರರಿಕ್ತ ವಿಷವನ್ನು ಸ್ವಲ್ಪ ಪ್ರಮಾಣದಲ್ಲಿ ಚುಚ್ಚುಮದ್ದಾಗಿ ಆರೋಗ್ಯಸ್ಥಿತಿಯಲ್ಲಿ ಇರುವಾತನಿಗೆ ಕೊಟ್ಟಾಗ ವಿಷಹಾರಿಯು ದೇಹದಲ್ಲೆ ಉತ್ಪನ್ನವಾಗಿ ಮುಂದೆ ಎಂದೋ ವ್ಯಕ್ತಿ ಅದೇ ವಿಷಕ್ಕೆ ತುತ್ತಾಗುವ ಸಂದರ್ಭವನ್ನು ನಿವಾರಿಸಬಹುದು. ಇದಕ್ಕೆ ಸಕ್ರಿಯರಕ್ಷಣೆ (ಆ್ಯಕ್ಟಿವ್ ಇಮ್ಯೂನಿಟಿ) ಎಂದು ಹೆಸರು. ಜೀವಿವಿಷಹಾರಿಗಳು ಸ್ವತಃ ದೇಹದಲ್ಲಿ ದುಷ್ಪರಿಣಾಮಗಳನ್ನು ಉಂಟುಮಾಡಬಹುದು. ಅವು ಪ್ರೋಟೀನುಗಳು ಆಗಿರುವುದರಿಂದ ಅನುಕೂಲವಾಗಲೆಂದು ಅವನ್ನು ಉಪಯೋಗಿಸಿದ ಸಂದರ್ಭಗಳಲ್ಲಿ ಅವು ನಿರೀಕ್ಷಿಸಿದಂತೆ ಅನುಕೂಲಮಾಡದೆ ಸೀರಮ್ ಸಿಕ್‍ನೆಸ್, ಅನಾಫೈಲಾಕ್ಸಿಸ್ ಮುಂತಾದ ಅಲ್ಪ ಅಥವಾ ಘೋರ ಒಗ್ಗದಿಕೆ ಪರಿಣಾಮಗಳನ್ನು ಉಂಟುಮಾಡಬಹುದು. ವಾಸ್ತವವಾಗಿ ದೇಹದಲ್ಲಿ ನೈಸರ್ಗಿಕವಾಗಿಯೋ ಅನಿಶ್ಚಿತಪೂರ್ವ ಪ್ರಚೋದನೆಯಿಂದಲೋ ಜೀವಿವಿಷಗಳ ಇರುವಿಕೆಯನ್ನು ಇಂಥ ಒಗ್ಗಿದಿಕೆಯ ಅಲ್ಪ ಪರಿಣಾಮಗಳಿಂದ ಪತ್ತೆಮಾಡಲಾಗುತ್ತದೆ. ಡಿಫ್ತೀರಿಯ ರೋಗಕ್ಕೆ ವ್ಯಕ್ತಿ ಸುಲಭವಾಗಿ ತುತ್ತಾಗುವಂತಿದೆಯೇ ಇಲ್ಲವೇ ವ್ಯಕ್ತಿಯಲ್ಲಿ ವಿಷಹಾರಿ ಇರುವುದರಿಂದ ಸ್ವಾಭಾವಿಕ ರಕ್ಷಣೆ ಉಂಟೋ ಇಲ್ಲವೋ ಎಂಬುದನ್ನು ವ್ಯಕ್ತಿಯ ಚರ್ಮದ ಅಡಿಯಲ್ಲಿ ಸಾರರಿಕ್ತಗೊಳಿಸಿದ ಡಿಫ್ತೀರಿಯ ವಿಷವನ್ನು ಅಲ್ಪಪ್ರಮಾಣದಲ್ಲಿ ಚುಚ್ಚಿ ಸ್ಥಳೀಯವಾಗಿ ಏಳುವ ಗಂಧೆ ಊತಗಳಿಂದ ಪತ್ತೆಮಾಡಬಹುದು. ಇದಕ್ಕೆ ಶಿಕ್ಕನ ಪರೀಕ್ಷೆ (ಶಿಕ್ಸ್ ಟೆಸ್ಟ್) ಎಂದು ಹೆಸರು. 
(ಎನ್.ಬಿ.ಎಸ್.)	
ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ